ಪ್ರೂಸ್ಟ್, ಜೋಸೆಫ್ ಲೂಯಿ
1754-1826. ಫ್ರಾನ್ಸ್ ದೇಶದ ರಸಾಯನವಿಜ್ಞಾನಿ. ರಾಸಾಯನಿಕ ಸಂಯೋಜನೆಯ ಐದು ಸರ್ವ ಸಮನ್ವಯ ನಿಯಮಗಳಲ್ಲಿ ಒಂದಾದ ನಿಯತ ಪ್ರಮಾಣ ನಿಯಮದ ಪ್ರತಿಪಾದಕ. 1754 ಸೆಪ್ಟೆಂಬರ್ 26ರಂದು ಆ್ಯಂಗರ್ಸ್ ಎಂಬಲ್ಲಿ ಜನನ. ಈತನ ತಂದೆ ಒಬ್ಬ ಔಷಧ ವ್ಯಾಪಾರಿ. ಚಿಕ್ಕಂದಿನಿಂದಲೂ ಫ್ರೂಸ್ಟ್ ರಸಾಯನವಿಜ್ಞಾನದ ವಾತಾವರಣದಲ್ಲಿ ಬೆಳೆದ. ಪ್ಯಾರಿಸ್ಸಿನಲ್ಲಿ ರೂಲೆ ಎಂಬ ಗುರುವಿನ ಬಳಿ ವಿದ್ಯಾಭ್ಯಾಸ ಮಾಡಿ ಅಲ್ಲಿಯೇ ಒಂದು ಆಸ್ಪತ್ರೆಯಲ್ಲಿ ಔಷಧಶಾಸ್ತ್ರಜ್ಞನಾಗಿ ಕೆಲಸಕ್ಕೆ ಸೇರಿದ. ಅನಂತರ ಸ್ಪೇನ್ ದೇಶಕ್ಕೆ ಹೋಗಿ ಸೆಗೋವಿಯಾದಲ್ಲಿರುವ ಆರ್ಟಿಲ್ಲರಿ ಅಕಾಡೆಮಿಯಲ್ಲಿ ರಸಾಯನವಿಜ್ಞಾನದ ಅಧ್ಯಾಪಕನಾದ. ತರುವಾಯ ಆ ದೇಶದ ಇತರ ಕೆಲವು ವಿಶ್ವವಿದ್ಯಾಲಯಗಳಲ್ಲಿ ರಸಾಯನವಿಜ್ಞಾನ ಕಲಿಸಿ 1799ರಲ್ಲಿ ಮಾಡ್ರಿಡ್ಡಿನ ರಾಯಲ್ ಲ್ಯಾಬೊರೇಟರಿ ಆಫ್ ನ್ಯಾಚುರಲ್ ಹಿಸ್ಟರಿಯ ನಿರ್ದೇಶಕನ ಪದವಿಗೇರಿದ. ಆದರೆ 1808ರ ಸುಮಾರಿಗೆ ಫ್ರಾನ್ಸಿನ ಸೈನಿಕರ ಕೈಯಲ್ಲಿ ಈತನ ಪೋಷಕನಾದ ನಾಲ್ಕನೆಯ ಚಾಲ್ರ್ಸನ ಪತನವಾಯಿತು. ಅಲ್ಲದೇ ಇವನ ಪ್ರಯೋಗಶಾಲೆಯೂ ನಾಶವಾಯಿತು. ಆಗ ಮರಳಿ ತನ್ನ ದೇಶಕ್ಕೆ ಬಂದು ನೆಲಸಿದ.
ಈತ ರಾಯಲ್ ಲ್ಯಾಬೊರೇಟರಿಯ ನಿರ್ದೇಶಕನಾಗಿದ್ದಾಗ ಮಾಡಿದ ಸಂಶೋಧನೆಗಳಲ್ಲಿ ಅತಿ ಮುಖ್ಯವಾದದ್ದು ರಾಸಾಯನಿಕ ಸಂಯೋಜನ ನಿಯಮಗಳಿಗೆ ಸಂಬಂಧಪಟ್ಟದ್ದು. ಇದರ ಫಲಿತಾಂಶದ ವಿಷಯವಾಗಿ ಈತ ಎಂಟು ವರ್ಷಕಾಲ ಸಮಕಾಲೀನ ವಿಜ್ಞಾನಿ ಬರ್ತೊಲಿಟನೊಂದಿಗೆ ತುರುಸಿನಿಂದ ವಾದ ವಿವಾದ ನಡೆಸಿ ಕೊನೆಗೂ ತನ್ನ ನಿಲುಮೆ ಸರಿ ಎಂದು ಸಾಧಿಸಿದ. ಯಾವುದೇ ಸಂಯುಕ್ತದ ರಚನೆ ಸ್ಥಿರವಾಗಿರದೇ ಅದನ್ನು ತಯಾರಿಸಿದ ವಿಧಾನವನ್ನು ಅವಲಂಬಿಸಿ ವ್ಯತ್ಯಾಸವಾಗುತ್ತದೆ ಎಂಬುದು ಬರ್ತೊಲಿಟನ ನಂಬಿಕೆ. ಆದರೆ ಪ್ರೂಸ್ಟ್ ಇದನ್ನು ಒಪ್ಪದೇ ಅನೇಕ ರಾಸಾಯನಿಕ ಸಂಯುಕ್ತಗಳಲ್ಲಿರುವ ಧಾತುಗಳ ರಚನೆಯನ್ನು ಪರಿಮಾಣಾತ್ಮಕವಾಗಿ ಕಂಡುಹಿಡಿದು, ಧಾತುಗಳು ನಿಯತ ಪ್ರಮಾಣದಲ್ಲಿ ಸಂಯೋಜಿಸುತ್ತವೆ, ಆದ್ದರಿಂದ ಶುದ್ಧವಾದ ಒಂದು ರಾಸಾಯನಿಕ ಸಂಯುಕ್ತದ ರಚನೆ ಅದನ್ನು ತಯಾರಿಸಿದ ವಿಧಾನವನ್ನು ಅವಲಂಬಿಸಿಲ್ಲ ಎಂಬ ನಿಯಮವನ್ನು ಪ್ರತಿಪಾದಿಸಿದ. ಇದೇ ನಿಯತ ಪ್ರಮಾಣ ನಿಯಮ. ಇದನ್ನು ದೃಢ ಪ್ರಮಾಣದ ನಿಯಮ ಎಂದೂ ಹೇಳುವುದುಂಟು. ಇದರ ಪ್ರಕಾರ ಒಂದು ವಿಧಾನದಿಂದ ತಯಾರಿಸಿದ ನೀರಿನಲ್ಲಿ x ಗ್ರಾಮ್ ಆಕ್ಸಿಜನ್ ಮತ್ತು ಥಿ ಗ್ರಾಮ್ ಹೈಡ್ರೊಜನ್ ಇದ್ದರೆ ಮತ್ತಾವುದೇ ವಿಧಾನದಿಂದ ತಯಾರಿಸಿದ ನೀರಿನಲ್ಲಿ ಸಹ ಆಕ್ಸಿಜನ್ ಮತ್ತು ಹೈಡ್ರೋಜನ್ನುಗಳ ಪ್ರಮಾಣ ಅಷ್ಟೇ ಅಂದರೆ x:ಥಿ ಪ್ರಮಾಣದಲ್ಲಿರುತ್ತದೆ. ಈ ನಿಯಮ ಪ್ರಾಯೋಗಿಕ ರಸಾಯನ ವಿಜ್ಞಾನದ ಬುನಾದಿ. ಏಕೆಂದರೆ ಇದರಿಂದ ಅಣು ಸೂತ್ರವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಅಲ್ಲದೆ ರಾಸಾಯನಿಕ ಸಮೀಕರಣಗಳನ್ನು ಬರೆಯಬಹುದು.

ತಾಮ್ರ ಮತ್ತು ಕಬ್ಬಿಣಗಳ ಸಲ್ಛೈಡುಗಳೂ ಅವುಗಳ ಆಕ್ಸೈಡುಗಳೂ ಪ್ರೂಸ್ಟನಿಗೆ ಗೊತ್ತಿದ್ದುವು. ಆದರೆ ಈ ಸಂಯುಕ್ತಗಳ ವಿಶ್ಲೇಷಣೆಯಲ್ಲಿ ಆತ ಮಾಡಿದ ಸಣ್ಣ ದೋಷದಿಂದಾಗಿ ಆತನಿಗೆ ರಾಸಾಯನಿಕ ಸಂಯೋಜನೆಯ ಇನ್ನೊಂದು ನಿಯಮವಾದ ಗಣಿತಾನುಪಾತದ ನಿಯಮವನ್ನು ಶೋಧಿಸುವ ಕೀರ್ತಿ ಸಲ್ಲದೇ ಹೋಯಿತು. ಪ್ರೂಸ್ಟನ ಇತರ ಮುಖ್ಯ ಸಂಶೋಧನೆಗಳಿವು: ಆಕ್ಸೈಡ್ ಮತ್ತು ಹೈಡ್ರಾಕ್ಸೆಡುಗಳಿಗಿರುವ ಭೇದವನ್ನು ಕಂಡುಹಿಡಿದದ್ದು, ಮತ್ತು ಶರ್ಕರಗಳ ವೈವಿಧ್ಯಕ್ಕೆ ಸಂಬಂಧಪಟ್ಟದ್ದು. ಅವನು ಗ್ಲೂಕೋಸನ್ನು ಶೋಧಿಸಿದನಲ್ಲದೇ ದ್ರಾಕ್ಷಿ ಹಣ್ಣಿನಿಂದ ಮ್ಯಾನೋಸನ್ನು ಬೇರ್ಪಡಿಸಿದ ಕೂಡ.

ಪ್ರೂಸ್ಟ್ ಫ್ರಾನ್ಸಿಗೆ ಮರಳಿದಾಗ ನೆಪೋಲಿಯನ್ ಈತನಿಗೆ ಬೀಟ್‍ರೂಟಿನಿಂದ ಸಕ್ಕರೆ ತಯಾರಿಸುವ ಉದ್ದಿಮೆ ಸ್ಥಾಪನೆಗಾಗಿ ಧನ ಸಹಾಯ ಮಂಜೂರು ಮಾಡಿದ. ಆದರೆ ಪ್ರೂಸ್ಟ್ ಇದನ್ನು ಸ್ವೀಕರಿಸಲಿಲ್ಲ. ನೆಪೋಲಿಯನ್ನನ ಮರಣಾನಂತರ ಹದಿನೆಂಟನೆಯ ಲೂಯಿ ಈತನಿಗೆ ನಿವೃತ್ತಿ ವೇತನ ಕೊಟ್ಟು ಗೌರವಿಸಿದ. ಫ್ರೆಂಚ್ ಅಕಾಡಮಿಯೂ ಪ್ರೂಸ್ಟನನ್ನು ತನ್ನ ಸದಸ್ಯನಾಗಿ ಮಾಡಿಕೊಂಡು ಗೌರವಿಸಿತು. ಹುಟ್ಟೂರಾದ ಆ್ಯಂಗರ್ಸನಲ್ಲಿ ಪ್ರೂಸ್ಟ್ 1826 ಜುಲೈ 5ರಂದು ಮೃತನಾದ.
(ಎಸ್.ವೈ.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ